ಹಾಸನ: ದೇಶದಲ್ಲಿ ಕೆಲ ನಾಯಕರನ್ನು ಖಳನಾಯಕರಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಚರಿತ್ರೆಯ ಚಾರಿತ್ರ್ಯ ಹರಣ ಮಾಡಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಆದಿಚುಂಚನಗಿರಿ ಶಾಖಾ ಮಠದ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಜಾತಿ ಧರ್ಮಕ್ಕಿಂತ ಮನುಷತ್ವಕ್ಕೆ ಮನ್ನಣೆ ನೀಡುವ ಗುಣವನ್ನು ಬೆಳೆಸಬೇಕು. ಕಾಗೆಯ ಕಾರುಣ್ಯ ಆದರ್ಶವಾಗಿಸಬೇಕು. ಏಕೆಂದರೆ ಕೋಗಿಲೆಯ ಸಂತತಿ ಹೆಚ್ಚಿಸುವುದು ಕಾಗೆ. ಗಾಂಧಿ, ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯ ಇರಬಹುದು. ಅದಕ್ಕಾಗಿ ಮತ್ತೊಬ್ಬರನ್ನು ಖಳನಾಯಕರನ್ನಾಗಿ ಚಿತ್ರಿಸಬಾರದು. ಕಲ್ಯಾಣ ರಾಜ್ಯ ನಿರ್ಮಾಣ ಮಾಡುವ ಬದಲು ಕಾಂಚಾಣ ರಾಜ್ಯ ನಿರ್ಮಾಣ ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೊಡ್ಡವರಲ್ಲಿ ಮಕ್ಕಳ ಮನಸ್ಸು ಹುಟ್ಟಿದರೆ ಸಮಾಜದಲ್ಲಿ ಸಮಾನತೆ ಮೂಡಲಿದೆ. ಕುವೆಂಪು ಅವರ ವೈಚಾರಿಕತೆ, ಗಾಂಧೀಜಿ ಅವರ ಹಿಂದೂ ಧರ್ಮದ ಸಹಿಷ್ಣುತೆ, ವಿವೇಕಾನಂದರಂತಹ ವ್ಯಕ್ತಿತ್ವ, ಬೇಡರ ಕಣ್ಣಪ್ಪ-ಶಬರಿಯಂತಹ ಭಕ್ತರು, ಪಂಪ-ಬಸವಣ್ಣನವರ ಮನುಷ್ಯ ಕುಲ ಒಂದೇ ಎಂಬ ಮನೋಧರ್ಮ ಇಂದಿನ ಜನ ಸಮುದಾಯದಲ್ಲಿ ಮೂಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಿಯಾಲಿಟಿ ಶೋಗಳಲ್ಲಿ ಮಕ್ಕಳ ಮುಗ್ಧತೆ ಮರೆ ಮಾಚಿ ಅಸಹಜ ರೀತಿಯಲ್ಲಿ ದೊಡ್ಡವರಂತೆ ಬಿಂಬಿಸುವುದರ ಕುರಿತು ಬೇಸರ ವ್ಯಕ್ತಪಡಿಸಿದರು. ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಶೇಕಡಾ 72ರಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರತಿ ವರ್ಷ 1,60,779 ಮಕ್ಕಳು ಶಾಲೆ ಬಿಡುತ್ತಿದ್ದು, 6 ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ. ದೇಶದಲ್ಲಿ ಹುಟ್ಟಿದ ದಿನವೇ 3.9 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಶೇಕಡಾ 53 ರಷ್ಟು ಹೆಣ್ಣು ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದು, ಹೆಣ್ಣು ಭ್ರೂಣ ಹತ್ಯೆ ಭಾರತದಲ್ಲಿಯೇ ಹೆಚ್ಚು ನಡೆಯುತ್ತಿದೆ. ಹಸುಗೂಸುಗಳ ಮಧ್ಯೆ ಸಮಾನತೆ ಬಿತ್ತುವ ಸಮಾನ ಶಾಲಾ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕುವೆಂಪು ಕಾಲದಿಂದ ಇಲ್ಲಿ ತನಕ ಹಲವು ಕನ್ನಡ ಜಾತ್ರೆಗಳು ನಡೆದಿವೆ. ಆದರೂ ಕನ್ನಡ ಭಾಷೆ, ಸಾಹಿತ್ಯ ಕುಂಟುತ್ತಾ ಸಾಗುತ್ತಿದೆ. ಎಳೆಯ ಮನಸ್ಸಿನಲ್ಲಿ ಸಾಹಿತ್ಯ ಚಿಂತನೆ ಮೂಡಿದರೆ ಸೋರಗುತ್ತಾ ಸಾಗಿರುವ ಕನ್ನಡ ಭಾಷೆ ಮತ್ತೆ ಸಮೃದ್ಧವಾಗುತ್ತದೆ. ಯುವ ಕವಿಗಳ ಕವನ ಸಂಕಲನಗಳು ಕನ್ನಡ ನಾಡಿನಲ್ಲಿ ಪುನಃ ಕುವೆಂಪು, ಬೇಂದ್ರೆ, ಪಂಪ ಹುಟ್ಟುವರೆಂಬ ಆಶಯ ಮೂಡಿಸಿದವು ಎಂದು ಹೇಳಿದರು. ಮಕ್ಕಳ ಅಂತಃಕರಣ ಶುದ್ಧವಿರುವ ಮಟ್ಟಕ್ಕೆ ದೊಡ್ಡವರ ಅಂತಃಕರಣವು ಶುದ್ಧವಾದಲ್ಲಿ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ. ಭಾವನೆ ಇಟ್ಟುಕೊಂಡು ಬರೆದರೆ ಅದ್ಬುತ ಸಾಹಿತ್ಯ ಹೊರ ಬರುತ್ತದೆ. ಸಾಹಿತಿಗಳು ದೇಶದ ಆಸ್ತಿ. ಅಂತಪ್ರಜ್ಞೆ ನಿರ್ಮಲವಾಗಿದ್ದರೆ ಅಂತಹ ಸಾಹಿತ್ಯ ಚಿರಕಾಲ ಉಳಿಯುತ್ತದೆ. ಸಾಹಿತ್ಯ ಪ್ರಭೆ ಎಲ್ಲ ಕಡೆ ಪಸರಿಸಲಿ ಎಂದು ನುಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನ. ಅಶೋಕ್, ದೇಶ ಕಟ್ಟುವ ಮಕ್ಕಳ ಸಾಹಿತ್ಯ ಸಮ್ಮೇಳನ ಐತಿಹಾಸಿಕವಾಗಿದ್ದು, ಇಂದಿನ ವ್ಯವಸ್ಥೆಯಲ್ಲಿ ಮಕ್ಕಳಿಂದಷ್ಟೇ ಬದಲಾವಣೆ ಬಯಸಲು ಸಾಧ್ಯ ಎಂದರು. ಬೆಳಗ್ಗೆ ಕ್ರೀಡಾಂಗಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಸಿ.ಎನ್.ಅಶೋಕ್, ರಾಷ್ಟ್ರಧ್ಜಜಾರೋಹಣವನ್ನು ಶಂಭುನಾಥ ಸ್ವಾಮೀಜಿ ನೆರವೇರಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್, ಪತ್ರಕರ್ತ ಬಿ.ಆರ್.ಉದಯ್ ಕುಮಾರ್, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ ಗುರೂಜೀ, ಶಿಕ್ಷಣಾಧಿಕಾರಿ ರುದ್ರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೆಂಕಟೇಶ್, ಸಮ್ಮೇಳನದ ಸಹ ಅಧ್ಯಕ್ಷರಾದ ರೇವಂತ್ ರಾಜೀವ್, ಪ್ರದ್ಯುಮ್ನ ಮೂರ್ತಿ, ಅಭಿಷೇಕ್ ಉಭಾಳೆ ಹಾಜರಿದ್ದರು.
ಕವನ ಸಂಕಲನ ಬಿಡುಗಡೆ
ಸಮ್ಮೇಳನದಲ್ಲಿ ಯುವ ಕವಿಗಳ ನವಿಲುಗರಿ, ಪದ್ಮಾರಾಗ, ಚಿಗುರು, ಸೌಗಂಧಿಕ, ಮೌಲ್ಯ, ಚಿತ್ತಾರ ಸೇರಿದಂತೆ ಹಲವು ಕವನ ಸಂಕಲನಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ, ಬರಗೂರು ರಾಮಚಂದ್ರಪ್ಪ, ಸಮ್ಮೇಳನದ ಅಧ್ಯಕ್ಷೆ ಬಿಡುಗಡೆ ಮಾಡಿದರು. ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕೇರಳ, ಆಂದ್ರಪ್ರದೇಶ, ಗೋವಾ, ಮುಂಬೈ, ಮದ್ರಾಸ್ನಿಂದ ಮಕ್ಕಳು ಬಂದಿದ್ದರು.
ದೇಸಿ ಆಟ ನುಂಗಿದ ವಿಡಿಯೋ ಗೇಮ್
ಸಮ್ಮೇಳನದ ಸರ್ವಾಧ್ಯಕ್ಷೆ ಕೀರ್ತನಾ ನಾಯಕ್ ಮಾತನಾಡಿ, ‘ಸಾಂಪ್ರದಾಯಿಕ ಆಟಗಳಾದ ಲಗೋರಿ, ಮರಕೋತಿ, ಚಿನ್ನಿದಾಂಡು, ಆಣೆಕಲ್ಲು, ಚೌಕಾಬರ, ಅಳಿಗುಣೆ ಮನೆ ಆಟಗಳನ್ನು ಮೊಬೈಲ್ನ ವಿಡಿಯೋ ಗೆಮ್ಗಳು ನುಂಗುತ್ತಿವೆ. ಹೀಗೆ ಹಲವು ಗೊಂದಲಗಳಿಂದ ಹೊರಬಂದು ನಮ್ಮ ಶಕ್ತಿಯನ್ನು, ಪ್ರತಿಭೆಯನ್ನು ಹೊರ ಹಾಕಲು ಈ ಸಮ್ಮೇಳನ ಒಂದು ಉತ್ತಮ ವೇದಿಕೆಯಾಗಿದೆ’ ಎಂದು ನುಡಿದರು.
ಕನ್ನಡ ನಾಡು, ನುಡಿ, ಜಲ, ಮುಚ್ಚುತ್ತಿರುವ ಕನ್ನಡ ಮಾಧ್ಯಮ ಶಾಲೆ, ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಇನ್ನು ಹಲವು ಸಮಸ್ಯೆಗಳು ಕಣ್ಮುಂದಿವೆ. ಕರ್ನಾಟಕ ಏಕೀಕರಣ ಚಳುವಳಿ ಮತ್ತೆ ನಡೆದರೆ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬಹುದು ಎಂದು ಅಭಿಪ್ರಾಯಪಟ್ಟರು. ಪರಭಾಷಾ ವ್ಯಾಮೋಹಕ್ಕೆ ಸಿಲುಕಿದ ಕನ್ನಡಿಗರ ಸ್ಥಿತಿ ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ ಮೃಗದ ಸೇಡು ನಮ್ಮ ಪಾಡು ಪರರನುಡಿಗೆ ಮಿಡುಕುವ ಎಂಬತಾಗಿದೆ. ಕನ್ನಡಿಗನೆದೆಯಲ್ಲಿ ಕನ್ನಡ ಜಾಗೃತಿಗೊಳಿಸಬೇಕಾದರೆ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಮವ ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು ಎಂಬ ಮಾತು ಪ್ರಸ್ತುತವಾಗಿದೆ ಎಂದರು.
ಕಣ್ಮನ ಸೆಳೆದ ಮೆರವಣಿಗೆ
ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಹೇಮಾವತಿ ಪ್ರತಿಮೆ ಬಳಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನಂದಿನಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಾಡಿನ ಕಿರ್ತಿಯನ್ನು ಹೆಚ್ಚಿಸುವ ಮತ್ತು ಕನ್ನಡ, ನಾಡು, ನುಡಿಯನ್ನು ಮತ್ತಷ್ಟು ಶ್ರೀಮಂತವಾಗಿಸುವ ಕೆಲಸ ಮಕ್ಕಳಿಂದ ಮುಂದುವರಿಯಲಿ ಎಂದು ಹೇಳಿದರು. ಸರ್ವಾಧ್ಯಕ್ಷೆ ತುಮಕೂರು ಜಿಲ್ಲೆಯ ಕೀರ್ತನಾ ನಾಯಕ್, ಸಹ ಅಧ್ಯಕ್ಷರಾದ ಮಂಡ್ಯ ಜಿಲ್ಲೆಯ ರೇವಂತ್ ರಾಜೀವ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯಮ್ನ ಮೂರ್ತಿ ಮತ್ತು ದೆಹಲಿಯ ಅಭಿಷೇಕ್ ಉಭಾಳೆ ಅವರಿಗೆ ಮೈಸೂರು ಪೇಟ ತೋಡಿಸಿ, ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಜಿಲ್ಲೆ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ಬಂದಿದ್ದ ಶಾಲಾ ವಿದ್ಯಾರ್ಥಿಗಳು, ವಿವಿಧ ಶಾಲೆಗಳ ಆಕರ್ಷಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಹನೀಯರ ವೇಷ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ಸೋಮನ ಕುಣಿತ, ಕರಗ ಕುಣಿತ, ಚರ್ಮ ವಾದ್ಯ ತಂಡ, ಯಕ್ಷಗಾನ, ಕೀಲು ಕುದುರೆ, ಡೊಳ್ಳು ಕುಣಿತ, ಕೋಲಾಟ, ಕಂಸಾಳೆ ತಂಡಗಳ ನೋಡುಗರ ಕಣ್ಮನ ಸೆಳೆಯಿತು. ಎನ್. ಆರ್. ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ, ಶಂಕರಮಠ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮೂಲಕ ಸಮ್ಮೇಳನ ನಡೆಯುವ ಜಿಲ್ಲಾ ಕ್ರೀಡಾಂಗಣ ತಲುಪಿತು.
ಮುಖಂಡ ಎಚ್.ಎಸ್. ಅನೀಲ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ತಹಶೀಲ್ದಾರ್ ಮೇಘನ, ಸಾಮಾಜಿಕ ಕಾರ್ಯಕರ್ತ ಮಹಂತಪ್ಪ ಹಾಜರಿದ್ದರು.
ಮಕ್ಕಳಿಗೆ ಹೋಳಿಗೆ ಊಟ
ಹತ್ತು ಸಾವಿರ ಮಕ್ಕಳಿಗೆ ಊಟ ಮಾಡಲು ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿಯೇ ಪ್ರತ್ಯೇಕ ಶಾಮಿಯಾನದಲ್ಲಿ ಮಕ್ಕಳಿಗೆ ಮಧ್ಯಾಹ್ನ ಊಟ ನೀಡಲಾಯಿತು. ಹೋಳಿಗೆ, ತರಕಾರಿ ಬಾತ್, ಉಪ್ಪಿನಕಾಯಿ, ಮೊಸರನ್ನದ ರುಚಿ ಸವಿದರು.
ಐವತ್ತಕ್ಕೂ ಹೆಚ್ಚು ಪುಸ್ತಕ ಮಳಿಗೆ
ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಐವತ್ತಕ್ಕೂ ಹೆಚ್ಚು ಹೆಚ್ಚು ಮಳಿಗೆ ತೆರೆಯಲಾಗಿದೆ. ಮಕ್ಕಳು ಬರೆದ ಕವನ ಸಂಕಲನ, ಕೃತಿಗಳು ಹಾಗೂ ಹಿರಿಯ ಸಾಹಿತಿಗಳ ಕಾದಂಬರಿ, ಕಥೆ, ಕವನ ಸಂಕಲನಗಳನ್ನು ಮಾರಾಟಕ್ಕೆ ಇಡಲಾಗಿದೆ. ಪುಸ್ತಕ ಮಳಿಗೆಗಳ ಬಳಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.
- kondinews, Hassan.